logo

ಎಸ್‌ಸಿ ಪಟ್ಟಿಯಿಂದ ಕೆಲ ಜಾತಿ ಕೈಬಿಡಲು ಕೋರಿ ಅರ್ಜಿ; ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌! ಯಾವೆಲ್ಲಾ ಜಾತಿ?

ನೋಟಿಸ್‌! ಯಾವೆಲ್ಲಾ ಜಾತಿ?
High Court Notice To Center State Government: ಪರಿಶಿಷ್ಟ ಜಾತಿಯಿಂದ ಕೆಲ ಜಾತಿಗಳನ್ನು ಕೈಬಿಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹೈಲೈಟ್ಸ್‌:
* ಬೋವಿ, ಕೊರಮ, ಕೊರಚ, ಲಂಬಾಣಿ (ಬಂಜಾರ) ಜಾತಿಗಳನ್ನು ಕರ್ನಾಟಕದ ಪರಿಶಿಷ್ಟ ಜಾತಿಯಿಂದ ಕೈಬಿಡಲು ಅರ್ಜಿ ಆಹ್ವಾನ.
* ಹೈಕೋರ್ಟ್‌ನಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ, ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್‌.
* ರಾಯಚೂರು ಜಿಲ್ಲೆಯ ಸಿವಿಲ್‌ ಎಂಜಿನಿಯರ್‌ ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್‌ ಮಿತ್ರಾ ಸಲ್ಲಿಸಿದ್ದ ಪಿಐಎಲ್‌.

ಬೆಂಗಳೂರು: ಬೋವಿ, ಕೊರಮ, ಕೊರಚ, ಲಂಬಾಣಿ (ಬಂಜಾರ) ಜಾತಿಗಳನ್ನು ಕರ್ನಾಟಕದ ಪರಿಶಿಷ್ಟ ಜಾತಿ (ಎಸ್ಸಿ)ಗಳ ಪಟ್ಟಿಯಿಂದ ಕೈಬಿಡಬೇಕೆಂದು ಕೋರಿ ಸಲ್ಲಿಸಿರುವ ಪಿಐಎಲ್‌ ಸಂಬಂಧ ಹೈಕೋರ್ಟ್‌ ಕಡೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ, ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್‌ ನೀಡಲಾಗಿದೆ.
ರಾಯಚೂರು ಜಿಲ್ಲೆಯ ಸಿವಿಲ್‌ ಎಂಜಿನಿಯರ್‌, ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್‌ ಮಿತ್ರಾ ಸಲ್ಲಿಸಿದ್ದ ಪಿಐಎಲ್‌ ಸಿಜೆ ಎನ್‌.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು.
ಸೃಶ್ಯ ಜಾತಿಗಳಾಗಿರುವ ಹಾಗೂ ಪರಿಶಿಷ್ಟ ಜಾತಿಗಳಲ್ಲದ ಲಂಬಾಣಿ (ಬಂಜಾರ), ಕೊರಮ, ಕೊರಚ, ಬೋವಿ ಜಾತಿಗಳನ್ನು ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಸಂವಿಧಾನದ ಪರಿಚ್ಛೇದ 14, 16, 17, 46, 243 (ಝಡ್‌), 330, 332, 341 ಮತ್ತು 366ರ ಉಲ್ಲಂಘನೆಯಾಗಿದೆ. ಈ ಜಾತಿಗಳನ್ನು ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಿ ಹೊರಡಿಸಲಾದ ಆದೇಶ ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. ಈ ಕುರಿತ ಮನವಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೊಗಕ್ಕೆ ಸಲ್ಲಿಸಬೇಕು. ಆಯೋಗವು ಆ ಮನವಿ ಪರಿಶೀಲಿಸಿ ಸಂಬಂಧಪಟ್ಟ ಪ್ರಾಧಿಕಾರವಾದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ವರದಿ ಸಲ್ಲಿಸಬೇಕೆಂದು 2020ರ ಫೆ.14 ರಂದು ಆದೇಶಿಸಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಕರ್ನಾಟಕ ಪ್ರಸ್ತಾವನೆ ಕಳಿಸಲಿಲ್ಲ
ಸುಪ್ರೀಂ ನಿರ್ದೇಶನದಂತೆ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದೆ. ಅದನ್ನು ಆಧರಿಸಿ 2020ರ ಮಾರ್ಚ್‌ 12 ರಂದು ಆಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು, ಕರ್ನಾಟಕ ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಪರಿಶಿಷ್ಟ ಜಾತಿಯೇತರ ಜಾತಿಗಳನ್ನು ಕೈ ಬಿಡುವ ಕುರಿತು ಪ್ರಸ್ತಾವನೆ ಕಳಿಸುವಂತೆ ತಿಳಿಸಿತ್ತು. ಆದರೆ, ಕರ್ನಾಟಕ ಪ್ರಸ್ತಾವನೆ ಕಳಿಸಲಿಲ್ಲ. ನಂತರ ಇದೇ ಮಾದರಿಯ ಪತ್ರವನ್ನು 2020ರ ಮೇ 14ರಂದು ಮತ್ತೆ ಆಯೋಗ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿತ್ತು. ಆ ನಂತರ ನಾನು ಮುಖ್ಯಕಾರ್ಯದರ್ಶಿಗಳಿಗೂ ಮನವಿ ಪತ್ರ ನೀಡಿದ್ದೆ ಎಂದು ಅರ್ಜಿಯಲ್ಲಿತಿಳಿಸಲಾಗಿದೆ.
ಅಂತಿಮವಾಗಿ 2023 ರ ಫೆ.1 6ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆಯೋಗಕ್ಕೆ ಪತ್ರ ಬರೆದು, ಈ ನಾಲ್ಕು ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿಯೇ ಉಳಿಸುವುದಾಗಿ ತಿಳಿಸಿದ್ದರು. ಜತೆಗೆ ನನ್ನ ಮನವಿ ತಿರಸ್ಕರಿಸಿದ್ದರು. ನಂತರ 2023ರ ಜು.24ರಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದೆ. ಈ ವಿಚಾರವನ್ನು ಸೂಕ್ತ ಪರಿಹಾರಕ್ಕಾಗಿ ಹೈಕೋರ್ಟ್‌ ಮೊರೆ ಹೋಗುವಂತೆ ನನಗೆ ಸೂಚಿಸಿತ್ತು ಎಂದು ಅರ್ಜಿದಾರರು ಕೋರಿದ್ದಾರೆ.

1
247 views